ಆನಂದ 4
	ಗೌತಮ ಬುದ್ಧನ ಶಿಷ್ಯರಲ್ಲಿ ಪ್ರಮುಖನಾದವ. ಭಿಕ್ಷುವಾಗುವ ಮುನ್ನ ಮಲ್ಲ ವಂಶದ ಕ್ಷತ್ರಿಯ ರಾಜುಪುತ್ರನಾಗಿದ್ದ. ಗೌತಮಬುದ್ಧನ ಗೆಳೆಯ. ಪರ್ಯಟನ ಕಾಲದಲ್ಲಿ ಬುದ್ಧ ಅನುಪಿಯೆಗೆ ಬಂದಾಗ ಅಲ್ಲಿ ಆನಂದನೂ ಸೇರಿ ನಾಲ್ಕೈದು ಜನ ಜ್ಞಾತಿಗಳು ಭಿಕ್ಷುಗಳಾದರು. ಗುರು ಪಯೋಜೀರ್ಣನಾದಾಗ ಆನಂದ ಅವನ ಪರಿಚಾರಕನಾಗಿ ನಿಯಮಿತನಾದ. ಸಂಘಕ್ಕೆ ಸ್ತ್ರೀಯರ ಪ್ರವೇಶವಾದುದು ಆನಂದನಿಂದ. ಭಿಕ್ಷುಣಿ ಸಂಘವೇರ್ಪಟ್ಟುದೂ ಅವನಿಂದಲೇ. ಬುದ್ಧ ಅವನ ಮೇಲೆ ವಿಶೇಷವಾದ ವಾತ್ಸಲ್ಯವಿಟ್ಟಿದ್ದುದು ಮಹಾಪರಿನಿಬ್ಬಾಣಸುತ್ತಂತದಿಂದ ತಿಳಿಯುತ್ತದೆ. ಬುದ್ಧನ ನಿರ್ವಾಣವಾದ ಮೇಲೆ ರಾಜಗೃಹದಲ್ಲಿ ನಡೆದ ಮಹಾಸಂಗೀತೆಯಲ್ಲಿ ಸುತ್ತಪಿಟಕ ರೂಪಗೊಂಡುದು ಆನಂದನ ನೆನಪಿನ ಆಧಾರದ ಮೇಲೆ. ಬುದ್ಧನ ಅನಂತರ ಮಹಾಕಶ್ಯಪನೂ ಅವನ ಅನಂತರ ಆನಂದನೂ ಸಂಘಾಚಾರ್ಯರಾಗಿದ್ದರೆಂದು ಮಹಾಯಾನದವರ ಕಲ್ಪನೆ. ಆನಂದ ಅಗ್ರಸ್ರಾವಕನೆಂದೂ ಅರ್ಹತನೆಂದೂ ಕೀರ್ತಿವೆತ್ತಿದ್ದಾನೆ. ಇವನ ಜೀವನವನ್ನು ಚಿತ್ರಿಸುವ ಶ್ರೀನಿವಾಸರ ಒಂದು ಕನ್ನಡ ಸಣ್ಣಕಥೆ ಖ್ಯಾತವಾಗಿದೆ.
 		 
 (ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ